ಗ್ರೋಷಿಯಸ್, ಹ್ಯೂಗೊ

1583-1645. ಡಚ್ ನ್ಯಾಯಶಾಸ್ತ್ರಜ್ಞ, ರಾಜತಂತ್ರ ನಿಪುಣ, ಭಾಷಾಶಾಸ್ತ್ರಜ್ಞ, ಕವಿ, ದೇವತಾಶಾಸ್ತ್ರವಿದ, ಇತಿಹಾಸಕಾರ, ಅಂತರರಾಷ್ಟ್ರೀಯ ನ್ಯಾಯವನ್ನು ರೂಪಿಸುವುದರಲ್ಲಿ ಈತನ ಬರೆಹಗಳು ಪ್ರಧಾನ ಪಾತ್ರ ವಹಿಸಿವೆ.
ಗ್ರೋಷಿಯಸ್ 1583ರ ಏಪ್ರಿಲ್ 10ರಂದು ಡೆಲ್ಫ್ಟ್‍ನಲ್ಲಿ ಹುಟ್ಟಿದ. ತಂದೆ ಸುಸಂಸ್ಕ್ರತ; ಡೆಲ್ಫ್ಟ್‍ನ ಪೌರಾಧ್ಯಕ್ಷ (ಬರ್ಗೊಮಾಸ್ಟರ್) ಮತ್ತು ಲೈಡನ್ ವಿಶ್ವವಿದ್ಯಾಲಯದ ಕ್ಯೂರೇಟರ್. ಅವನಿಗೆ ಮಗನ ವಿದ್ಯಾಭ್ಯಾಸದಲ್ಲಿ ವಿಶೇಷ ಆಸಕ್ತಿಯಿತ್ತು. ಡಂಭವಿಲ್ಲದೆ ವಿದ್ವತ್ತನ್ನೂ ಆಡಂಬರವಿಲ್ಲದ ಧರ್ಮದೃಷ್ಟಿಯನ್ನೂ ಗ್ರೋಷಿಯಸ್ ಸಂಪಾದಿಸಿಕೊಂಡ. 15ನೆಯ ವಯಸ್ಸಿನಲ್ಲಿ ಮಾರ್ಷಿಯಾನೆಸ್ ಕ್ಯಾಪೆಲನ ವಿಶ್ವಕೋಶವನ್ನು ಈತ ಸಂಪಾದಿಸಿದ. ರಾಯಭಾರಿ ಓಲ್ಡೆನ್ ಬಾರ್ನೆವೆಲ್ಟನೊಂದಿಗೆ ಫ್ರಾನ್ಸಿಗೆ ಹೋದ. ಫ್ರಾನ್ಸಿನ ದೊರೆ 4ನೆಯ ಹೆನ್ರಿ ಇವನನ್ನು ಹಾಲೆಂಡಿನ ಪವಾಡವೆಂದು ಹೊಗಳಿ ಸ್ವಾಗತಿಸಿದ. ಆ ಕಾಲದ ಅಂತರಾಷ್ಟ್ರೀಯ ಪರಿಸ್ಥಿತಿಯನ್ನು ಕುರಿತು ಗ್ರೋಷಿಯಸ್ ಒಂದು ಪದ್ಯ ಬರೆದ. ಈತ ಹಾಲೆಂಡಿಗೆ ಮರಳುವಾಗ ಆರ್ಲಿಯನ್ಸಿನಲ್ಲಿ ಇವನಿಗೆ ಡಾಕ್ಟರ್ ಆಫ್ ಲಾ ಪದವಿ ಲಭ್ಯವಾಯಿತು. ಹೇಗಿನಲ್ಲಿ ಇವನು ಪ್ರಮುಖ ನ್ಯಾಯಾವಾದಿಯಾದ. ಸರ್ಕಾರದ ವರಿಷ್ಠರು ಇವನ ಗೆಳೆಯರಾದರು. 1601ರಲ್ಲಿ ಹಾಲೆಂಡ್ ರಾಜ್ಯಗಳ ಇತಿಹಾಸಲೇಖಕನಾಗಿ ಇವನ ನೇಮಕವಾಯಿತು. ಈತ ಲ್ಯಾಟಿನಿನಲ್ಲಿ ಎರಡು ನಾಟಕಗಳನ್ನು ರಚಿಸಿದನಲ್ಲದೆ ಸೋಲಿಯ ಆರಾಟಸನ ಸಾಹಿತ್ಯಕೃತಿಗಳನ್ನು ಸಂಪಾದಿಸಿದ.

1604ರಲ್ಲಿ ಡಚ್ ಈಸ್ಟ ಇಂಡಿಯಾ ಕಂಪನಿಯ ಅಧಿಕಾರಿಯೊಬ್ಬ ಪೋರ್ಚುಗೀಸ್ ನೌಕೆಯೊಂದನ್ನು ಹಿಡಿದುಕೊಂಡ. ವ್ಯಾಪಾರನೌಕೆಗಳನ್ನು ಹಿಡಿದುಕೊಳ್ಳುವುದರ ನ್ಯಾಯಬದ್ಧತೆಯನ್ನು ಕುರಿತು ಬರೆಯಬೇಕೆಂದು ಕಂಪನಿ ಗ್ರೋಷಿಯಸನನ್ನು ಕೇಳಿಕೊಂಡಿತು. 1608ರಲ್ಲಿ ಆತ ಈ ಬಗ್ಗೆ ಒಂದು ವಿದ್ವತ್ಪ್ರಬಂಧ ಬರೆದ. ದೈವೇಚ್ಚೆಯಿಂದ ನಿಸರ್ಗ ದತ್ತವಾಗಿ ಬಂದಿರುವ ನಿಯಮಗಳು ನಾಲ್ಕು : ರಾಷ್ಟ್ರವೇ ಆಗಲಿ, ವ್ಯಕ್ತಿಯೇ ಆಗಲಿ ಇನ್ನೊಂದು ರಾಷ್ಟ್ರ ಅಥವಾ ವ್ಯಕ್ತಿಯ ಆಕ್ರಮಣ ನಡೆಸಬಾರದು, ಇನ್ನೊಂದು ರಾಷ್ಟ್ರ ಅಥವಾ ವ್ಯಕ್ತಿಗೆ ಸೇರಿದ್ದನ್ನು ವಶಪಡಿಸಿಕೊಳ್ಳಬಾರದು. ಕೌಲುಗಳನ್ನೂ ಕರಾರುಗಳನ್ನೂ ಕಡೆಗಣಿಸಬಾರದು, ಅಪಕೃತ್ಯ ಮಾಡಬಾರದು. ಈ ನಾಲ್ಕು ನಿಯಮಗಳನ್ನೂ ನ್ಯಾಯಮೂರ್ತಿಗಳು ಎತ್ತಿ ಹಿಡಿಯಬೇಕು. ನ್ಯಾಯಮೂರ್ತಿಗಳಿಲ್ಲದಿದ್ದರೆ ರಾಷ್ಟ್ರಗಳೇ ಅಥವಾ ವ್ಯಕ್ತಿಗಳೇ ಯುದ್ದ ಅಥವಾ ಖಾಸಗಿ ಮೊಕ್ಕದ್ದಮೆಯ ಮೂಲಕ ಇವನ್ನು ಎತ್ತಿಹಿಡಿಯಬೇಕು. ಡಚ್ಚರು ವ್ಯಾಪಾರೋದ್ದೇಶದಿಂದ ವಿಶಾಲ ಸಾಗರದಲ್ಲಿ ಈಸ್ಟ್ ಇಂಡೀಸಿಗೆ ಯಾನ ಮಾಡುವುದಕ್ಕೆ ಪೋರ್ಚುಗೀಸರು ಅಡ್ಡಿಪಡಿಸಿದ್ದರಿಂದ ತಮಗೆ ಆದ ನಷ್ಟವನ್ನು ತುಂಬಿಕೊಳ್ಳಲು ಅವರು ಪೋರ್ಚುಗೀಸ್ ವ್ಯಾಪಾರ ನೌಕೆಗಳನ್ನು ಹಿಡಿದುಕೊಂಡಿದ್ದು ತಪ್ಪಲ್ಲ-ಎಂದು ಈತ ವಾದಿಸಿದ್ದ. ಮುಂದೆ ಈ ನಿಯಮಗಳನ್ನೆ ಆಧಾರವಾಗಿ ಇಟ್ಟುಕೊಂಡು ಇಡೀ ಮಾನವತೆಯ ನ್ಯಾಯವನ್ನು- ಖಾಸಗಿ, ದಂಡೀಯ ಸಂವೈಧಾನಿಕ ಅಂತರಾಷ್ಟ್ರೀಯ ಎಲ್ಲವನ್ನು ಕುರಿತ ಗ್ರಂಥವೊಂದನ್ನು ಬರೆದ, ಇದು ತುಂಬ ಪ್ರಸಿದ್ಧವಾಯಿತು. 1607ರಲ್ಲಿ ಈತ ಹಾಲೆಂಡ್ ಪ್ರಾಂತ್ಯದ ಮಹಾ ನ್ಯಾಯವಾದಿಯಾಗಿ ನೇಮಕವಾದ. ಮರುವರ್ಷ ಇವನು ಮೇರಿಯ ವಾನ್ ರೀಜರ್ಸ್‍ಬರ್ಕಳನ್ನು ಮದುವೆಯಾದ. 1613ರಲ್ಲಿ ರಾಟರ್ಡಾಮಿನ ಅಧಿಕಾರಿಯಾದ.

ಆ ಸಮಯದಲ್ಲಿ ಹಾಲೆಂಡಿನಲ್ಲಿ ಮತೀಯ ಕಲಹಗಳು ಪ್ರಬಲವಾಗಿದ್ದವು. ಇವುಗಳಲ್ಲಿ ಓಲ್ಡೆನ್‍ಬಾರ್ನೆವೆಲ್ಟ್ ಒಂದು ಪಕ್ಷದ ಪರವಾಗಿದ್ದ. ಗ್ರೋಷಿಯಸ್ ತನ್ನ ಲೇಖನಗಳ ಮೂಲಕ ಅವನಿಗೆ ಬೆಂಬಲ ನೀಡಿದ. ಈ ಕಲಹಗಳು ಕೇವಲ ಮತೀಯವಾಗಿಲ್ಲದೆ ರಾಜಕೀಯ ಬಣ್ಣವನ್ನೂ ತಳೆದಿದ್ದುದರಿಂದ 1618ರಲ್ಲಿ ಓಲ್ಡೆನ್‍ಬಾರ್ನೆವೆಲ್ಟನೂ ಗ್ರೋಷಿಯಸನೂ ದಸ್ತಗಿರಿಯಾದರು. ಓಲ್ಡನ್‍ಬಾರ್ನೆವೆಲ್ಟ್ ಮರಣ ದಂಡನೆಗೂ ಗ್ರೋಷಿಯಸ್ ಜೀವಾವಧಿ ಶಿಕ್ಷೆಗೂ ಗುರಿಯಾದರು. ಪುಸ್ತಕ ಹಾಗೂ ಬಟ್ಟೆ ತುಂಬುವ ಪೆಟ್ಟಿಗೆಯೊಂದರಲ್ಲಿ ಅಡಗಿ ಇವನು ತಪ್ಪಿಸಿಕೊಂಡ. ಇವನ ಬದಲು ಇವನ ಹೆಂಡತಿ ಸೆರೆಮನೆಯಲ್ಲಿ ಉಳಿದುಕೊಂಡಳು. ಗ್ರೋಷಿಯಸ್ ಪ್ಯಾರಿಸಿನಲ್ಲಿ ಆಶ್ರಯ ಪಡೆದ (1621). 13ನೆಯ ಲೂಯಿ ಇವನಿಗೆ ಪೆನ್ಷನ್ ನೀಡಿದ. ಹತ್ತು ವರ್ಷಗಳ ಅನಂತರ ಇದು ನಿಂತುಹೋಯಿತು. ಇವನು ಹಿಂದೆಯೇ ಬರೆದು ಮುಗಿಸಿ ಆಗ್ಗಿಂದಾಗ್ಗೆ ಪರಿಷ್ಕರಿಸಿದ ನ್ಯಾಯಗ್ರಂಥ 1625ರಲ್ಲಿ ಪ್ರಕಟವಾಯಿತು. ಇದರಿಂದ ಇವನ ಕೀರ್ತಿ ಬೆಳೆಯಿತು. ಸ್ವೀಡನಿನ ದೊರೆ ಹಾಗೂ ರಾಣಿ ಇವನನ್ನು ಫ್ರೆಂಚ್ ರಾಜಾಸ್ಥಾನದಲ್ಲಿ ರಾಯಭಾರಿಯಾಗಿ ನೇಮಿಸಿದರು (1634). ಗ್ರೋಷಿಯಸ್ 1645ರ ವರೆಗೂ ಈ ಹುದ್ದೆಯಲ್ಲಿದ್ದು ಸ್ಟಾಕೋಂಗೆ ಹಿಂದಿರುಗಿದ. ಅಲ್ಲಿಯ ರಾಜಾಸ್ಥಾನದ ವಾತಾವರಣ ಬದಲಾಗಿರಲಿಲ್ಲ. ಇವನಿಗೆ ಅಲ್ಲಿ ಸ್ವಾಗತ ದೊರಕಲಿಲ್ಲ. ಗ್ರೋಷಿಯಸ್ ಹಾಲೆಂಡಿಗೆ ಹಿಂದಿರುಗುತ್ತಿದ್ದಾಗ ಮಾರ್ಗಮಧ್ಯದಲ್ಲಿ ರಾಸ್ಟಾಕ್‍ನಲ್ಲಿ 1645ರ ಆಗಸ್ಟ್ 29 ರಂದು, ಇವನ ಹಡುಗು ಬಂಡೆಗೆ ಬಡಿಯಿತು ; ಗ್ರೋಷಿಯಸ್ ತೀರಿಕೊಂಡ.										(ಬಿ.ಡಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ